ರೋಡೆ ಐಲೆಂಡ್ -
ಅಮೆರಿಕ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗದಲ್ಲಿರುವ ಒಂದು ಚಿಕ್ಕ ರಾಜ್ಯ. ಇದು 1790ರಲ್ಲಿ ರಾಜ್ಯವಾಗಿ ರೂಪುಗೊಂಡಿತು. ಸುಂದರವಾದ ನರಗನ್‍ಸೆಟ್ ಕೊಲ್ಲಿಯಲ್ಲಿರುವ 36 ದ್ವೀಪ ಸಮೂಹವನ್ನೊಳಗೊಂಡ ಈ ರಾಜ್ಯ ಜನಪ್ರಿಯ ಪ್ರವಾಸಿ ತಾಣವಾಗಿದೆ. ಬೇಸಿಗೆಯಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವರು. ವಿಸ್ತೀರ್ಣ 3,142 ಚ.ಕಿಮೀ. ಜನಸಂಖ್ಯೆ : 1,48,319 (2000). ಇಲ್ಲಿನ ದ್ವೀಪ ಸಮೂಹದಲ್ಲಿ ಅಕ್ವಿಡ್‍ನೆಕ್ ದೊಡ್ಡ ದ್ವೀಪ. ಇದನ್ನೆ 1644ರಲ್ಲಿ ಅಧಿಕೃತ ರೋಡೆ ಐಲೆಂಡ್ ಎಂದು ಕರೆಯಲಾಗಿತ್ತು. ಬ್ರಿಸ್ಟೋಲ್, ಕೆಂಟ್, ನ್ಯೂಪೋರ್ಟ್ ಪ್ರಾವಿಡೆನ್ಸ್ ಮತ್ತು ವಾಷಿಂಗ್‍ಟನ್ ಈ ರಾಜ್ಯದ ಐದು ಕೌಂಟಿಗಳೂ ಎರಡು ಮಹಾನಗರಗಳೂ ಈ ರಾಜ್ಯಕ್ಕೆ ಸೇರಿವೆ. ಈ ರಾಜ್ಯದ ಆಡಳಿತ ಕೇಂದ್ರ ಮತ್ತು ರಾಜಧಾನಿ ಪ್ರಾವಿಡೆನ್ಸ್. ಜನಸಂಖ್ಯೆ : 1,60,728 (1990).

ರೋಡೆ ಐಲೆಂಡ್ ರಾಜ್ಯವನ್ನು ಕಿರಿದಾಗಿ ರೋಡೆಲೆಂಡ್ ದ್ವೀಪ ಎಂದು ಕರೆಯುವುದುಂಟು. ಚಿಕ್ಕದಾದ ಈ ರಾಜ್ಯದ ಅಧಿಕೃತ ಹೆಸರು ರೋಡೆ ದ್ವೀಪ ರಾಜ್ಯ ಮತ್ತು ಪ್ರಾವಿಡೆನ್ಸ್ ಪ್ಲಾಂಟೆಷನ್ಸ್. ಜನಪ್ರಿಯ ಹೆಸರು ಸಾಗರ ರಾಜ್ಯ, ಲಿಟಲ್ ರೋಡಿ ಎಂದೂ ಕರೆಯುವರು. 1524ರಲ್ಲಿ ಫ್ರಾನ್ಸ್ ಪರವಾಗಿ ಗಿಯೊವನ್ನಿಡ ವೆರಜಾನೊ ಎಂಬ ಇಟಲಿಯ ನಾವಿಕ ನರಗನ್‍ಸೆಟ್ ಕೊಲ್ಲಿಯನ್ನು ಸಂಶೋಧಿಸಿ ಈ ದ್ವೀಪಕ್ಕೆ ರೋಡೆ ಐಲೆಂಡ್ ಎಂಬ ಹೆಸರನ್ನು ಕೊಟ್ಟಿರಬಹುದೆಂದೂ ಅಡ್ರಿಯನ್ ಬ್ಲಾಕ್ ಎಂಬ ಡಚ್ ನಾವಿಕ 1614ರಲ್ಲಿ ಇದನ್ನು ಕೆಂಪುದ್ವೀಪ (ರೆಡ್ ಐಲೆಂಡ್) ಎಂಬ ಹೆಸರನ್ನು ಇಟ್ಟಿರಬಹುದೆಂದೂ ಊಹಿಸಲಾಗಿದೆ. ರೋಡೆ ಐಲೆಂಡ್ ಸಹ ಕೆಂಪು ಮಣ್ಣಿನ ಭೂಮಿ ಯಿಂದ ಕೂಡಿದೆ. 

ಮೇಲ್ಮೈ ಲಕ್ಷಣ : ರೋಡೆ ಐಲೆಂಡ್ 42º ಉತ್ತರ ಅಕ್ಷಾಂಶದಿಂದ 44º ಉತ್ತರ ಅಕ್ಷಾಂಶದ ವರೆಗೂ 69º ಪಶ್ಚಿಮದಿಂದ 71º ಪೂರ್ವ ರೇಖಾಂಶದ ವರೆಗೆ ಹರಡಿದೆ. ಇದು ಅಟ್ಲಾಂಟಿಕ್ ಸಾಗರದ ನರಗನ್‍ಸೆಟ್ ಕೊಲ್ಲಿಯವರೆಗೆ ಚಾಚಿಕೊಂಡಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಮುಖ ನಗರಗಳಾದ ಬೋಸ್ಟನ್‍ನ ದಕ್ಷಿಣಕ್ಕೂ ನ್ಯೂಯಾರ್ಕ್ ನಗರದ ಉತ್ತರಕ್ಕೂ ಕಂಡು ಬರುತ್ತದೆ. ರೋಡೆ ಐಲೆಂಡ್‍ನ ಉತ್ತರಕ್ಕೆ ಮೆಸಾಚುಸೆಟ್ಸ್ ಹಾಗೂ ದಕ್ಷಿಣಕ್ಕೆ ಕನೆಕ್ಟಿಕಟ್ ಮತ್ತು ನ್ಯೂಯಾರ್ಕ್ (ಜಲಭಾಗ) ರಾಜ್ಯ ಇದರ ಪೂರ್ವ ಮತ್ತು ದಕ್ಷಿಣದಲ್ಲಿ ನರಗನ್‍ಸೆಟ್ ಕೊಲ್ಲಿ, ರೋಡೆ ಐಲೆಂಡ್ ಸೌಂಡ್ ಮತ್ತು ಪೂರ್ವ ಹಾಗೂ ದಕ್ಷಿಣಕ್ಕೆ ಅಟ್ಲಾಂಟಿಕ್ ಸಾಗರ ಸುತ್ತುವರಿದಿವೆ.  

ಭೂಸ್ವರೂಪ : ರೋಡೆ ಐಲೆಂಡ್ ಎರಡು ಪ್ರಮುಖ ಸ್ವಾಭಾವಿಕ ಭೂಪ್ರದೇಶವನ್ನು ಒಳಗೊಂಡಿದೆ. ಮೊದಲನೆಯದು ತೀರದ ತಗ್ಗು ಪ್ರದೇಶಗಳು, ಎರಡನೆಯದು ನ್ಯೂ ಇಂಗ್ಲೆಂಡ್ ಪೂರ್ವದ ಉನ್ನತ ಭಾಗಗಳು. ತೀರದ ತಗ್ಗು ಪ್ರದೇಶಗಳು ರೋಡೆ ಐಲೆಂಡ್‍ನ ಅರ್ಧಕ್ಕಿಂತಲೂ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ. ಇದು ನರಗನ್‍ಸೆಟ್ ಕೊಲ್ಲಿಯಲ್ಲಿರುವ ದ್ವೀಪಗಳು ಮತ್ತು ನ್ಯೂ ಇಂಗ್ಲೆಂಡ್‍ನ ಪೂರ್ವ ತೀರ ಪ್ರದೇಶಗಳನ್ನು ಒಳಗೊಂಡಿದೆ. ಇದರ ತೀರ ಪ್ರದೇಶಗಳಲ್ಲಿ ಮರಳಿನಿಂದ ಕೂಡಿದ ಮೈದಾನ, ಉಪ್ಪು ನೀರಿನ ಕೊಳಗಳು ತೀರದುದ್ದಕ್ಕೂ ಕಂಡುಬರುತ್ತವೆ. ನರಗನ್‍ಸೆಟ್ ಕೊಲ್ಲಿಯ ಪೂರ್ವಕ್ಕೆ ಇಳಿಜಾರಿದ್ದು, ಕೊಲ್ಲಿಯ ಪಶ್ಚಿಮ ಏರಿಳಿತದಿಂದ ಕೂಡಿದೆ. ನ್ಯೂ ಇಂಗ್ಲೆಂಡಿನ ಪೂರ್ವದ ಉನ್ನತ ಭಾಗಗಳು ರೋಡೆ ಐಲೆಂಡ್‍ನ ವಾಯವ್ಯ ಭಾಗವನ್ನು ಆವರಿಸಿದೆ. ಈ ಉನ್ನತ ಭಾಗ ಮೈನೆಯಿಂದ ಕನೆಕ್ಟಿಕಟ್‍ವರೆಗೆ ಹಬ್ಬಿದೆ. ಈ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದೆ. ಈ ಪ್ರದೇಶದ ಪಶ್ಚಿಮದ ಮಧ್ಯಭಾಗದಲ್ಲಿ ಜೆರಿಮೊತ್ ಬೆಟ್ಟವಿದೆ. ಇದು ಸಮುದ್ರ ಮಟ್ಟದಿಂದ 247 ಮೀ ಎತ್ತರವಿದ್ದು ಈ ರಾಜ್ಯದ ಅತ್ಯಂತ ಎತ್ತರದ ಪ್ರದೇಶವಾಗಿದೆ. ರೋಡೆ ಐಲೆಂಡ್ 36 ದ್ವೀಪಗಳನ್ನು ಒಳಗೊಂಡಿದೆ. ಇದರಲ್ಲಿ ರೋಡೆ ದ್ವೀಪ 117 ಚ.ಕಿಮೀ ವಿಸ್ತೀರ್ಣವುಳ್ಳ ದೊಡ್ಡ ದ್ವೀಪ. ಇದರ ದಕ್ಷಿಣದಲ್ಲಿ 16 ಕಿಮೀ ದೂರದಲ್ಲಿರುವ ನ್ಯೂ ಷೋರ್ ಹ್ಯಾಮ್ ಎನ್ನುವ ಬ್ಲಾಕ್ ಐಲೆಂಡ್ ದ್ವೀಪ 28 ಚ.ಕಿಮೀ ಇದೆ. ಇಲ್ಲಿನ ಎಲ್ಲಾ ಸಣ್ಣಪುಟ್ಟ ದ್ವೀಪಗಳಿಗೆ ಸೇತುವೆಗಳ ಮೂಲಕ, ದೋಣಿಗಳ ಮೂಲಕ ಸಂಪರ್ಕವಿದೆ. ರೋಡೆ ದ್ವೀಪ 64 ಕಿಮೀ ಉದ್ದದ ಸಮುದ್ರ ತೀರ ಪ್ರದೇಶವನ್ನು ಹೊಂದಿದೆ. ಇಲ್ಲಿನ ಎಲ್ಲಾ ದ್ವೀಪಗಳ ತೀರಪ್ರದೇಶದ ಉದ್ದ 618 ಕಿಮೀ.

ನದಿಗಳು ಮತ್ತು ಸರೋವರಗಳು : ಪ್ರಾವಿಡೆನ್ಸ್, ಸಾಕೊನೆಟ್ ಮತ್ತು ಸಿಕೊಂಕ್-ಇವು ಈ ರಾಜ್ಯದ ಮುಖ್ಯ ನದಿಗಳು. ಇವು ನರಗನ್‍ಸೆಟ್ ಕೊಲ್ಲಿಯ ಉಪ್ಪುನೀರಿನ ಬಾಹುಗಳು. ನರಗನ್ ಸೆಟ್ ಕೊಲ್ಲಿಗೆ ಸೇರುವ ಸಿಹಿನೀರಿನ ನದಿಗಳೆಂದರೆ ಪಾಟ್ಯೂಕ್ಸೆಟ್, ಪೆಟ್ಟಕಮ್‍ಸ್ಕಟ್, ಪೊಟೊವೊಮಟ್ ಮತ್ತು ವೂನಸ್‍ರ್ವಾಟುಕೆಟ್ ಮತ್ತು ಜೆಪಚೆಟ್, ಪೊನಗನ್ ಸೆಟ್ ಮತ್ತು ವುಡ್. ಸಿಚ್‍ವಾಟ್ ಅತ್ಯಂತ ದೊಡ್ಡ ಸರೋವರ. ಇದು ಪ್ರಾವಿಡೆನ್ಸ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ನೀರನ್ನು ಒದಗಿಸುತ್ತದೆ. ಇತರ ಮುಖ್ಯ ಸರೋವರಗಳೆಂದರೆ ವಾಚಾಗ್ ಹಾಗೂ ವರ್‍ಡೆನ್. ಈ ನದಿ ಮತ್ತು ಜಲಾಶಯಗಳ ಜಲಶಕ್ತಿಯೆ ಈ ರಾಜ್ಯದ ವಿದ್ಯುತ್ ಉತ್ಪತ್ತಿಯ ಮೂಲವಾಗಿದೆ. 

ವಾಯುಗುಣ : ನರಗನ್‍ಸೆಟ್ ಕೊಲ್ಲಿಯಿಂದ ಬೀಸುವ ಬೆಚ್ಚನೆಯ ವಾಯು ರೋಡೆ ದ್ವೀಪದ ವಾಸಿಗಳಿಗೆ ಹಿತಕರವಾಗಿಸಿದೆ. ಜನವರಿ ತಿಂಗಳಿನಲ್ಲಿ ಸರಾಸರಿ ಉಷ್ಣಾಂಶ-2º ಸೆ. ಹಾಗೂ ಜುಲೈ ತಿಂಗಳ ಸರಾಸರಿ ಉಷ್ಣಾಂಶ 22º ಸೆ. ಇರುತ್ತದೆ. ರಾಜ್ಯದ ವಾರ್ಷಿಕ ಸರಾಸರಿ ಮಳೆ 1120 ಮಿಮೀ. ಹಿಮವೃಷ್ಟಿಯ ವಾರ್ಷಿಕ ಸರಾಸರಿ 790 ಮಿಮೀ. ಚಂಡಮಾರುತಗಳು ಆಗಾಗ್ಗೆ ಈ ರಾಜ್ಯದ ತೀರಗಳಿಗೆ ಅಪ್ಪಳಿಸುವುದುಂಟು. ಇದರಿಂದ ಆಗಾಗ ಅಪಾರ ಕಷ್ಟನಷ್ಟ, ಸಾವು ನೋವುಗಳು ಸಂಭವಿಸುತ್ತವೆ. 

ಭೂವಿಭಾಗ : ರೋಡೆ ರಾಜ್ಯದ ಅತ್ಯಂತ ಫಲವತ್ತಾದ ಕೆಂಪುಮಣ್ಣು ನರಗನ್‍ಸೆಟ್ ಕೊಲ್ಲಿಯ ತೀರಪ್ರದೇಶಗಳಲ್ಲಿ ಕಂಡುಬರುತ್ತದೆ. ಮಿಯಾಮಿ ಕಲ್ಲು ಮಿಶ್ರಿತ ಮರಳು ಮಣ್ಣು ಕೊಲ್ಲಿಯ ಬಯಲು ಹಾಗೂ ಉನ್ನತ ಪ್ರದೇಶದಲ್ಲಿ ಕಂಡುಬರುತ್ತದೆ. ಕೆಲವು ಭಾಗಗಳಲ್ಲಿ ಕಂದು ಬಣ್ಣದ ಮಣ್ಣು ಕಂಡುಬರುತ್ತದೆ. ಗ್ಲೊಸೆಸ್ಟರ್ ಮರಳುಮಿಶ್ರಿತ ಮತ್ತು ಫಲವತ್ತಲ್ಲದ ಮಣ್ಣು ರಾಜ್ಯದ ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಕಂಡುಬರುತ್ತದೆ. 

ಸಸ್ಯವರ್ಗ : ಈ ರಾಜ್ಯದ ಕೃಷಿಕರು ಅಲಂಕರಣ ಗಿಡಗಳು, ಪೊದೆ ಜಾತಿಯ ಗಿಡಗಳು, ಆಲೂಗೆಡ್ಡೆ ಮತ್ತು ಸೇಬು ಇವುಗಳ ಕೃಷಿಗೆ ಹೆಚ್ಚು ಗಮನ ನೀಡುತ್ತಾರೆ. ರೋಡೆಐಲೆಂಡ್ ರಾಜ್ಯದ 3/5ರಷ್ಟು ಪ್ರದೇಶದಲ್ಲಿ ಅರಣ್ಯಗಳಿವೆ. ಈ ರಾಜ್ಯದಲ್ಲಿ ಕಂಡುಬರುವ ಪ್ರಮುಖ ಮರಗಳೆಂದರೆ ಆಶ್‍ಸ್, ಬರ್ಚ, ಸಿಡರ್, ಎಲ್ಮ್, ಹಿಕ್ಕರಿ, ಮ್ಯಾಪಲ್, ಓಕ್, ಪೈನ್, ಪೊಪ್ಲಾರ್ ಮತ್ತು ವಿಲ್ಲೊ. ಆಸ್ಟ್‍ರ್ ಮತ್ತು ಕ್ಯಾಟ್ವೆಲ್ಸ್ ಹೂವಿನ ಗಿಡಗಳು, ಕೆಂಪು ಜಿಂಕೆ ಹುಲ್ಲು, ವಿವಿಧ ಸಿಹಿನೀರಿನ ಹಾಗೂ ಉಪ್ಪು ನೀರಿನ ಜಲಸಸ್ಯಗಳೂ ಕಂಡುಬರುತ್ತದೆ. ವಿವಿಧ ಜಲಚರಗಳೂ ಮೀನುಗಳೂ ಸಾಕಷ್ಟಿವೆ. ಕಾಡು ನರಿ, ತೋಳ, ಜಿಂಕೆ, ಮೊಲ, ಮಿಂಕ್ಸ್, ರ್ಯಾಕೂನ್ ಇವುಗಳ ಜೊತೆಗೆ ಒಳನಾಡಿನ ಹಾಗೂ ಸಮುದ್ರತೀರದ ವಿವಿಧ ಪಕ್ಷಿ ಸಂಕುಲವಿದೆ. 
ಕೈಗಾರಿಕೆಗಳು : ರೋಡೆ ಐಲೆಂಡ್ ರಾಜ್ಯದಲ್ಲಿ ದೊರಕುವ ಗ್ರಾನೈಟ್ ಬೆಲೆ ಬಾಳುವ ಕಟ್ಟಡ ಸಾಮಗ್ರಿಗಳಲ್ಲಿ ಬಹು ಮುಖ್ಯವಾದದ್ದಾಗಿದೆ. ಈ ರಾಜ್ಯ ಚಿನ್ನ ಹಾಗೂ ಬೆಳ್ಳಿ ಆಭರಣಗಳ ತಯಾರಿಕೆಯಲ್ಲಿ ಇಡೀ ಸಂಯುಕ್ತ ಸಂಸ್ಥಾನದ ರಾಜ್ಯಗಳಿಗಿಂತ ಮುಂದಿದೆ. ಜವಳಿ, ವಿದ್ಯುತ್ ಸಂಬಂಧಿ ಕೈಗಾರಿಕೆ, ಬಲ್ಬ್, ವೈದ್ಯಕೀಯ ಶಸ್ತ್ರಚಿಕಿತ್ಸಾ ಉಪಕರಣಗಳ ತಯಾರಿಕೆ ಮತ್ತು ರಬ್ಬರ್ ವಸ್ತುಗಳು ವಿವಿಧ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿದೆ. 

ಸಾರಿಗೆ : ಈ ರಾಜ್ಯದಲ್ಲಿ ಸು.10,100 ಕಿಮೀ ಉದ್ದದ ಹೆದ್ದಾರಿ ರಸ್ತೆಗಳೂ ಇತರೇ ಬಗೆಯ ರಸ್ತೆಗಳೂ ಇವೆ. ಪ್ರಾವಿಡೆನ್ಸ್‍ನಿಂದ ಬಾಸ್ಟನ್‍ವರೆಗೆ 1835ರಲ್ಲಿ ಮೊಟ್ಟಮೊದಲು ಈ ರಾಜ್ಯದ ರೈಲುಮಾರ್ಗ ಆರಂಭವಾಯಿತು. ವಾರ್‍ವಿಕ್‍ನಲ್ಲಿರುವ ತಿಯೋಡರ್ ಫ್ರಾನ್ಸಿಸ್ ಗ್ರೀನ್ ಸ್ಟೇಟ್ ಅತಿದೊಡ್ಡ ವಿಮಾನ ನಿಲ್ದಾಣ. ನ್ಯೂಪೋರ್ಟ್ ಮತ್ತು ಪ್ರಾವಿಡೆನ್ಸ್ ರಾಜ್ಯದ ಅಂತಾರಾಷ್ಟ್ರೀಯ ಬಂದರುಗಳು. 

ಸರ್ಕಾರ : ಮೆಸಾಚುಸೆಟ್‍ನಿಂದ ಬಂದ ರೋಜರ್ ವಿಲಿಯಮ್ಸ್ 1636ರಲ್ಲಿ ಪ್ರಾವಿಡೆನ್ಸ್‍ನಲ್ಲಿ ಬಿಳಿಯರ ಒಂದು ಶಾಶ್ವತ ನೆಲೆಯನ್ನು ಸ್ಥಾಪಿಸಿದ. ಮುಂದೆ ಈ ಪ್ರದೇಶಕ್ಕೆ ಬಂದ ಜನ ತಮ್ಮ ತಮ್ಮ ವಸತಿಗಳನ್ನು ಸ್ಥಾಪಿಸಿಕೊಳ್ಳುತ್ತಾ ಹೋದರು. ಈ ಬಗೆಯಲ್ಲಿ 1639ರಲ್ಲಿ ರೋಡೆ ದ್ವೀಪ, ಪೋಟ್ರ್ಸ್‍ಮೌತ್, ನ್ಯೂಪೋರ್ಟ್ ಹಾಗೂ 1643ರಲ್ಲಿ ವಾರ್‍ವಿಕ್ ನೆಲೆಗಳು ಸ್ಥಾಪಿತವಾದವು. ರೋಜರ್ ವಿಲಿಯಮ್ಸ್ ತನ್ನ ನೆಲೆಗಳ ರಕ್ಷಣೆಗಾಗಿ ಎಲ್ಲಾ ವಸಾಹತುಗಳನ್ನು ಒಂದುಗೂಡಿಸಿ ಬ್ರಿಟಿಷ್ ಸಂಸತ್ತಿನಿಂದ 1644ರಲ್ಲಿ ಒಪ್ಪಿಗೆ ಪಡೆದ. 1647ರಲ್ಲಿ ನಾಲ್ಕೂ ನೆಲೆಗಳು ಒಂದು ವಸಾಹತಾಗಿ ಒಂದಾದವು. 1663ರಲ್ಲಿ 2ನೆಯ ಚಾಲ್ರ್ಸ್ ದೊರೆ “ಚಾರ್ಟರ್ ಆಫ್ ರೋಡೆ ಐಲ್ಯಾಂಡ್ ಅಂಡ್ ಪ್ರಾವಿಡೆನ್ಸ್ ಪ್ಲಾಂಟೇಷನ್ಸ್” ಎಂಬ ಎರಡನೆಯ ಸನ್ನದನ್ನು ಹೊರಡಿಸಿದ. 1843ರ ವರಗೆ ಇಲ್ಲಿಯ ಆಡಳಿತ ಈ ಸನ್ನದಿನ ಪ್ರಕಾರವೇ ನಡೆಯಿತು. ಮುಂದೆ ಕೆಲವು ಘಟನೆಗಳು ನಡೆದು ಸ್ಥಳೀಯರು ಬ್ರಿಟಿಷರನ್ನು ಅವರ ವಸಾಹತಿನಿಂದ ಓಡಿಸಲು ಆಕ್ರಮಣದಂತಹ ಕದನಗಳು ನಡೆದವು. ರೋಡೆ ದ್ವೀಪದ ಜನರು 1769ರಲ್ಲಿ ನ್ಯೂಪೋರ್ಟ್ ಬಂದರಿನಲ್ಲಿದ್ದ ಬ್ರಿಟಿಷರ ಲಿಬರ್ಟಿ ಹಡಗನ್ನು ಸುಟ್ಟುಹಾಕಿದರು. 1776 ರಿಂದ 1779ರ ವರೆಗೆ ಬ್ರಿಟಿಷ್ ಸೈನ್ಯ ರೋಡೆ ದ್ವೀಪದ ಕೆಲವು ಗುಂಪುಗಳ ಮೇಲೆ ದಾಳಿ ನಡೆಸಿ ಹಾಗೂ ನ್ಯೂಪೋರ್ಟ್‍ನ್ನು ತಮ್ಮ ವಶಪಡಿಸಿಕೊಂಡು ಆಡಳಿತ ನಡೆಸಿತು. 1776 ಮೇ 4ರಂದು ರೋಡೆ ವಸಾಹತು ತನ್ನ ಸ್ವಾತಂತ್ರ್ಯವನ್ನು ಘೋಷಿಸಿ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆಯಿತು. ಹೀಗೆ ಗ್ರೇಟ್‍ಬ್ರಿಟನ್‍ನಿಂದ ಸ್ವಾತಂತ್ರ್ಯ ಪಡೆದ ಅಮೆರಿಕ ಸಂಯುಕ್ತ ಸಂಸ್ಥಾನಗಳ 13 ವಸಾಹತುಗಳಲ್ಲಿ ಇದೇ ಮೊದಲನೆಯದು. ವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮಸೂದೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಬಿಲ್ ಆಫ್ ರೈಟ್ಸ್ ಮೂಲಕ ಸೇರಿಸಲು ಒಪ್ಪಿದಾಗ ರೋಡೆ ವಸಾಹತು 1790 ಮೇ 29 ರಂದು 13ನೆಯ ರಾಜ್ಯವಾಗಿ ಕೊನೆಯಲ್ಲಿ ಸೇರಿತು. 

ಈ ರಾಜ್ಯದಲ್ಲಿ ರಾಜ್ಯಪಾಲರನ್ನು ಎರಡು ವರ್ಷಕ್ಕೊಮ್ಮೆ ನೇಮಿಸಲಾಗುವುದು. ಇಲ್ಲಿನ ಶಾಸಕಾಂಗ 50 ಜನ ಸೆನೆಟ್ ಸದಸ್ಯರನ್ನು ಹೊಂದಿದ್ದು ಎರಡು ವರ್ಷಕ್ಕೊಮ್ಮೆ ಚುನಾಯಿಸಲಾಗುವುದು. 100 ಜನ ರಾಜ್ಯ ಪ್ರತಿನಿಧಿಗಳಿದ್ದು ಅವರನ್ನು ಎರಡು ವರ್ಷಕ್ಕೊಮ್ಮೆ ಆರಿಸ ಲಾಗುವುದು. ರೋಡೆ ರಾಜ್ಯದ 8 ನಗರಗಳು ಮತ್ತು 31 ಪಟ್ಟಣಗಳು ಸ್ಥಳೀಯ ಜನಾಡಳಿತ ಹೊಂದಿವೆ. ಇವು ತಮ್ಮ ಆಡಳಿತಕ್ಕೆ ಬೇಕಾದ ಕಾನೂನುಗಳನ್ನು ತಾವೇ ರಚಿಸಿಕೊಳ್ಳಬಹುದು.	
(ಸಿ.ಬಿ.;ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ